ಚೇಳುಕೊಂಡಿ ಗಿಡ
 ಬೊರ್ಯಾಜಿನೇಸೀ ಕುಟುಂಬಕ್ಕೆ ಸೇರಿದ ಹೀಲಿಯೋಟ್ರೋಪಿಯಂ ಇಂಡಿಕಮ್ ಎಂಬ ವೈಜ್ಞಾನಿಕ ಹೆಸರಿನ ಪುಟ್ಟ ಮೂಲಿಕೆ ಗಿಡ. ದಕ್ಷಿಣ ಭಾರತದ ಎಲ್ಲೆಡೆಗಳಲ್ಲಿ ಸಾಮಾನ್ಯವಾಗಿ ರಸ್ತೆಗಳ ಪಕ್ಕದಲ್ಲಿ ಅಥವಾ ಪಾಳು ಸ್ಥಳಗಳಲ್ಲಿ ಕಳೆಗಿಡವಾಗಿ ಬೆಳೆಯುತ್ತದೆ. ಇದು ಸಾಧಾರಣವಾಗಿ 2' ಎತ್ತರಕ್ಕೆ ಬೆಳೆಯುವ ಒರಟಾದ ಏಕವಾರ್ಷಿಕ ಸಸ್ಯ. ರೆಂಬೆಗಳು ಬಲು ಉದ್ದ; ತುಪ್ಪಳಿನಿಂದ ಆವೃತವಾಗಿವೆ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಆಕಾರ ಅಂಡದಂತೆ; ತುದಿ ಮೊಂಡು; ಅಂಚು ಗರಗಸದಂತೆ, ಹೂಗೊಂಚಲು ಸೈಮೋಸ್ ಮಾದರಿಯದು; ಚೇಳಿನ ಕೊಂಡಿಯಂತೆ ಬಾಗಿದೆ. ಇದರಿಂದಲೇ ಗೊಂಚಲಿಗೆ ಸ್ಕಾರ್ಪಿಯಾಯಿಡ್ ಸೈಮ್ ಎಂದು ಹೆಸರು. ಹೂಗಳು ನೀಲಿ ಇಲ್ಲವೆ ಊದಾ ಬಣ್ಣದವು. ಕಾಯಿಗಳು  ನಟ್‍ಲೆಟ್ ಮಾದರಿಯವು. ಒಂದೊಂದರಲ್ಲೂ ಕೊಕ್ಕೆಯಂಥ ಎರಡು ಬೀಜಗಳಿವೆ. ಚೇಳುಕೊಂಡಿ ಗಿಡ ಬಹಳ ಕಹಿ. ಇದಕ್ಕೆ ಅನೇಕ ವೈದ್ಯಕೀಯ ಗುಣಗಳಿವೆ. ಕೆಲವೆಡೆ ಇದನ್ನು ಹುಣ್ಣುಗಳಿಗೆ, ಗಾಯಗಳಿಗೆ, ವಾತ ಮತ್ತು ಕೀಟಗಳ ಮುಳ್ಳಿನ ನೋವು ನಿವಾರಣೆಗೆ ಮತ್ತು ಕೆಲವು ಚರ್ಮರೋಗಗಳಿಗೆ ಹೊರ ಔಷಧವಾಗಿ ಉಪಯೋಗಿಸಲಾಗುತ್ತದೆ. ಜ್ವರ ನಿವಾರಣೆಗೂ ಬಳಸುವುದುಂಟು, ಕಾಂಬೋಡಿಯದಲ್ಲಿ ಎಲೆಗಳ ಮತ್ತು ಎಳೆಯ ಕುಡಿಗಳ ಕಷಾಯವನ್ನು ತುರಿಕೆ, ಎದೆ ಸಂಬಂಧಿ ರೋಗಗಳು ಮತ್ತು ಕಜ್ಜಿಗಳಿಗೆ ಬಳಸುತ್ತಾರೆ. ಹಾಗೆಯೇ ಬೇರಿನ ಕಷಾಯವನ್ನು ಕೆಮ್ಮು ಮತ್ತು ಜ್ವರಕ್ಕೆ ಉಪಯೋಗಿಸುವುದಿದೆ. ಹೂಗಳು ಕಡಿಮೆ ಪ್ರಮಾಣದಲ್ಲಿ ಔಷಧವಾಗಿಯೂ ಅಧಿಕ ಪ್ರಮಾಣದಲ್ಲಿ ಗರ್ಭ ಸ್ರಾವಕವಾಗಿಯೂ ಬಳಕೆಯಲ್ಲಿವೆ ; ಮುಂಬಯಿ ಮತ್ತು ಇತರ ಕಡೆಗಳಲ್ಲಿ ಗಿಡದ ರಸವನ್ನು ಹಾವು ಚೇಳುಗಳ ಕಡಿತಕ್ಕೆ ಔಷಧವಾಗಿ ಉಪಯೋಗಿಸುವುದುಂಟು. ಎಲೆಗಳನ್ನು ಮೇಹ ಹಾಗೂ ದದ್ದುರೋಗ ಚಿಕಿತ್ಸೆಗೂ ರಸವನ್ನು ಮೊಡವೆ, ಒಸಡುಕುರು ಮತ್ತು ಕಣ್ಣು ಬೇನೆಗಳ ಚಿಕಿತ್ಸೆಗೂ ಬಳಸಬಹುದು. ಆಯುರ್ವೇದದ ಪ್ರಕಾರ ಗಿಡದ ರಸ ಹುಣ್ಣುಗಳನ್ನು ಶಮನ ಮಾಡುವುದಲ್ಲದೆ ಹರಳೆಣ್ಣೆಯೊಂದಿಗೆ ಕುಡಿಸಿದಾಗ ಚೇಳಿನ ವಿಷದಿಂದ ಉಂಟಾದ ಉರಿಯನ್ನೂ ನಾಯಿಕಡಿತವನ್ನೂ ವಾಸಿ ಮಾಡುವುದೆಂದು ಹೇಳಲಾಗಿದೆ.
(ಕೆ.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ